Tuesday, October 4, 2011

ಮನಸುಗಳ ಸೇತುವೆಯ ನಾವು ಮರೆತಿರುವೆವೆ??ಈ ಇ-ಮೇಲ್ ನ ಹಾವಳಿ ಜಾಸ್ತಿಯಾದ ಮೇಲೆ ಕೈ ಬರಹದ ಪತ್ರಗಳು ಮಾಯವಾಗುತ್ತಿದಾವೆ ಅ೦ತ ನಿಮಗ್ಯಾರಿಗು ಅನ್ನಿಸ್ತಾ ಇಲ್ವೆ? ಹೀಗೆಲ್ಲ ಅನ್ನಿಸೋಕ್ಕೆ ಅಥವ ಇದರ ಬಗೆಗಿನ ಯೋಚನೆಗಳು ನಮ್ಮ ಮೆದುಳಿನ ಬಳಿ ಸುಳಿಯೋಕ್ಕೆ ಬಿಡಲು ನಮ್ಮಗಳಿಗೆ ಪುರುಸೊತ್ತಾದರು ಎಲ್ಲಿದೆ ಅಲ್ಲವೆ. ನ೦ಗು ಇದೆಲ್ಲ ಮೊನ್ನೆ ಮೊನ್ನೆಯವರೆಗೂ ಅಷ್ಟಾಗಿ ಗಮನಕ್ಕೆ ಬ೦ದಿರಲಿಲ್ಲ ಎ೦ದರೂ ತಪ್ಪಾಗಲಾರದು. ಆದರೆ ಮೊನ್ನೆ ಅನಿಸಿದ್ದ೦ತೂ, ಅನಿಸಿ ಮರುಗಿದ್ದ೦ತೂ ಅಕ್ಷರಷಃ ಸತ್ಯ. ಅದು ಅನ್ನಿಸಿದ ಸ೦ದರ್ಭವನ್ನ ನಿಮ್ಮ ಹತ್ರ ಹ೦ಚಿಕೊಳ್ಳಬೇಕೆ೦ದೆ ಇದನ್ನು ಬರೀತಿದ್ದೀನಿ.

ಇತೀಚೆಗಷ್ಟೆ ಫೇಸ್ಬುಕ್ಕಿನಲ್ಲಿ ನನ್ನ ಕವನಗಳನ್ನ ಓದಿ, ನನ್ನ ಪರಿಚಯ ಬಯಸಿದ ಒಬ್ಬ ೧೬ ವರ್ಷದ ಹುಡುಗನ "ಫ್ರೆ೦ಡ್ ರಿಕ್ವೆಸ್ಟ್" ಅನ್ನು ನಾನು "ಅಕ್ಸೆಪ್ಟ್" ಮಾಡಿದ್ದೆ. ಅವನ ಪರಿಚವೂ ತಕ್ಕ ಮಟ್ಟಿಗೆ ಆಗಿತ್ತು. ಎರಡು ದಿನ ಕಳೆದು, ಆ ಹುಡುಗ ನನ್ನನ್ನು "ಅಕ್ಕ ನಾನು ನಿಮಗೊ೦ದು ಪತ್ರ ಬರೆಯುತ್ತೇನೆ ನಿಮ್ಮ ಅ೦ಚೆ ವಿಳಾಸ ಕೊಡಿ" ಎ೦ದ. ಇ-ಮೇಲ್ ಐಡಿ, ಫೋನ್ ನ೦ಬರುಗಳನ್ನು ಪಡೆದು "ಟಚ್" ನಲ್ಲಿರುವ ಈಗಿನ ಕಾಲದಲ್ಲಿ ಈ ಹುಡುಗ ಅ೦ಚೆ ವಿಳಾಸ ಕೇಳುತ್ತಿದ್ದಾನಲ್ಲ ಎ೦ದು ಬೆಚ್ಚಿದೆ. ಆದರೆ ನನಗೇ ಗೊತ್ತಿಲ್ಲದ ಹಾಗೆ ಮನಸ್ಸು ಸ೦ತೋಷವನ್ನು ಆಸ್ವಾದಿಸುತ್ತಿತ್ತು. ಹಿ೦ದೆ ಮು೦ದೆ ನೋಡದೆ ನಾನು ಆಗಲೆ ಅವನಿಗೆ ನನ್ನ ವಿಳಾಸವನ್ನು ಕೊಟ್ಟು ಬಿಟ್ಟಿದ್ದೆ. ಆ ಕ್ಷಣಕ್ಕೆ, ಇ೦ಟರ್ನೆಟ್ ಹ್ಯಾಕರ್ಸ್ ಬಗ್ಗೆಯಾಗಲಿ, ಸೈಬರ್ ಕ್ರೈಮ್ ಮಾಡುವ ಪುಢಾರಿಗಳ ಬಗ್ಗೆಯಾಗಲಿ ನನಗೆ ಯೋಚನೆಯೆ ಬರಲಿಲ್ಲ. ಹೆಸರು ಹೇಳಲು ಹಿ೦ಜರಿಯವ ಈ ಕಾಲದಲ್ಲಿ ನಾನು ಅವನಿಗೆ ನನ್ನ ಮನೆಯ ವಿಳಾಸವನ್ನು ಕೊಡಲು ಧೈರ್ಯವದೆಲ್ಲಿ೦ದ ಬ೦ತೋ ನನಗೇ ತಿಳಿಯದು. ಇದು ನನ್ನನ್ನು "ಅಕ್ಕ" ಎ೦ದು ಸ೦ಭೋದಿಸಿದ ಅವನ ಮುಗ್ಧತೆಯ ಪ್ರಭಾವವೋ ಅಥವ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ಮರೆತಿರುವ, ಏಳು-ಎ೦ಟನೆಯ ತರಗತಿಯಲ್ಲಿದ್ದಾಗ ಇರುತ್ತಿದ್ದ ಪತ್ರ ಬರೆಯುವ ಹುರುಪನ್ನು ಮತ್ತೆ ಮರುಕಳಿಸಿ ಪಡೆಯುವ ಹುಮ್ಮಸ್ಸೋ ನಾನು ತಿಳಿಯದಾದೆ. ಅವನಿಗೆ ವಿಳಾಸ ಕೊಟ್ಟಿದ್ದು ಆಗಿತ್ತು, ಮತ್ತೆ ಕಾರಣವನ್ನರಿತು ಸಾಧಿಸುವುದಾದರೂ ಏನನ್ನು ಎ೦ದುಕೊ೦ಡು ಸುಮ್ಮನಾದೆ. 

ಹೀಗೆ ಎರಡು ದಿನ ಕಳೆದವು(ಎರಡೇ ದಿನ). ಅ೦ದು ಭಾನುವಾರ. ಮನೆಗೆ ಬ೦ದ ಅಣ್ಣ ಅತ್ತಿಗೆಯರನ್ನು ರಾತ್ರಿ ಬೀಳ್ಕೊಟ್ಟು ಬರಲೆ೦ದು ಮನೆಯ ಗೇಟಿನವರೆಗೂ ಹೋಗಿದ್ದೆ. ಅವರು ಆಕಡೆ ಹೋದಮೇಲೆ, ಇನ್ನೇನು ಮೆಟ್ಟಿಲು ಹತ್ತಿ ಫಸ್ಟ್ ಫ್ಲೋರಿನಲ್ಲಿದ್ದ ಮನೆಗೆ ಬರಬೇಕು ಅಷ್ಟರಲ್ಲಿ, ಎ೦ದೂ ನೋಡದವಳು, ಆ ದಿನ ಅದೇಕೋ ಮನಸ್ಸಾಗಿ, ಮತ್ತೆ ತಿರುಗಿ ಗೇಟಿಗೆ ಬ೦ದು, ಅಲ್ಲಿ ಪತ್ರಗಳಿರುವ ಡಬ್ಬಿಯನ್ನು ತೆರೆದು ಕಣ್ಣಾಡಿಸಿದೆ. ನನ್ನ ಕಣ್ಣನ್ನು ನಾನೆ ನ೦ಬುವುದೋ ಬಿಡುವುದೋ ಗೊತ್ತಾಗಲಿಲ್ಲ. ಅಲ್ಲಿದ್ದ ಹತ್ತಾರು ವ್ಯಾವಹಾರಿಕ ಪತ್ರಗಳ ನಡುವೆ, ಇದೊ೦ದು ತಿಳಿ ನೀಲಿ ಬಣ್ಣದ "ಇನ್-ಲ್ಯಾ೦ಡ್ ಲೆಟರ್". ಆ ಪುಟಾಣಿಯ ಪತ್ರ ಬ೦ದಿತ್ತು. ಅದೂ ಆಹೊತ್ತು ಭಾನುವಾರ ಬೇರೆ ನನಗ೦ತೂ ನ೦ಬಲಸಾಧ್ಯ ಅ೦ತಲೇ ಅನ್ನಿಸಿದ್ದು. ಆದ್ರೆ ಅದು ಹೇಗೆ ಹಾಗಾಗಲು ಸಾಧ್ಯ. ಕೈಯಲ್ಲಿ ಪತ್ರವಿದ್ದದ್ದು ಅಷ್ಟೆ ನಿಜದ ಮಾತು. ನಾನು ಈಗಿರುವ ಮನೆಗೆ ಬ೦ದು ಆರು ತಿ೦ಗಳಷ್ಟೇ ಕಳೆದಿರುವುದು. ಇಲ್ಲಿಗೆ ಬ೦ದ ಮೇಲೆ ನನ್ನ ಹೆಸರಿಗೆ ಬ೦ದ ಮೊದಲ ಅ೦ಚೆಯದು. ನನ್ನ ಖುಷಿಗೆ ಆಹೊತ್ತು ಎಲ್ಲೆಯೇ ಇರಲಿಲ್ಲ. ಜೋರಾಗಿ ಚೀರಿ ಕುಣಿದು ಕುಪ್ಪಳಿಸಬೇಕೆನ್ನುವಷ್ಟು ಹಿಗ್ಗು. 

ನಾವು ಯಾವಗಲೂ, ಈಗಿನ ಮಕ್ಕಳು ನಮ್ಮ೦ತೆ ಅಲ್ಲ, ಮಣ್ಣಿನಲ್ಲಿ ಆಟವಾಡದೆ ಕ೦ಪ್ಯೂಟರ್ ಮು೦ದೆ ಕುಳಿತು ಲೋಕ ಮರೆಯುತ್ತಾರೆ. ನಾವದರೋ ಗೋಲಿಗಳನ್ನು ಕಲೆ ಹಾಕಿ, ಮರಳಿನಲ್ಲಿ ಆಟವಾಡಲು, ಹೊಸದಾಗಿ ಕಟ್ಟುತ್ತಿದ್ದ ಮನೆಗಳನ್ನು ಹುಡುಕಿಕೊ೦ಡು ಹೋಗುತ್ತಿದ್ದೆವು. ಹುಟ್ಟಿದ ಇಸವಿಯಲ್ಲಿ ವ್ಯತ್ಯಾಸ ಐದತ್ತು ವರ್ಷಗಳಿದ್ದರೂ, ಯೋಚನೆ ಮಾಡುವ ಧಾಟಿ, ಬುದ್ಧಿಯ ತೀಕ್ಷ್ಣತೆ ಎಲ್ಲದರಲ್ಲು ವ್ಯತ್ಯಾಸ ಅಜಗಜಾ೦ತರ. "ಕಾಲ ಬದಲಾಗಿದೆ" ಎನ್ನುವುದ೦ತು ನಮ್ಮ ನಿಮ್ಮ ಪೀಳಿಗೆಯವರು ದಿನ೦ಪ್ರತಿ ಹಾಡುವ ಹಾಡು. ಇನ್ನು ನಮ್ಮ ಹಿರಿಯರದ್ದೋ ಕೇಳಲೇ ಬೇಡಿ, ಇ೦ತಹ ಹಾಡೇ ಅವರ ಸುಪ್ರಭಾತವೆ೦ದರೂ ಅತಿಶಯವೇನಲ್ಲ. ಇ೦ತಹ ಬದಲಾದ ಕಾಲದಲ್ಲೂ, ಇವನ೦ತಹ ಕಾಳಜಿ ತೋರಿಸೋ ಹುಡುಗರು ಇದ್ದಾರ? ಇದ್ದರೂ ಅ೦ಥವನು ನನ್ನ ಕೈಗೆ ಸಿಗೋ ಅಷ್ಟು ಪುಣ್ಯವ೦ತಳು ನಾನಾಗಿದ್ದೀನಾ? ಅವನ "ಅಕ್ಕ" ಅನ್ನೋ ಉದ್ಗಾರದಲ್ಲಿ ಆಹೊತ್ತು ನಾನು ನನ್ನ ಜಗತ್ತನ್ನು ಕ೦ಡಿದ್ದೆ. 


ನಿಜ ಹೇಳಬೇಕೆ೦ದರೆ ಆ ಪತ್ರವನ್ನು ನಾನಿನ್ನು ಓದಿಯೇ ಇರಲಿಲ್ಲ. ಅದಕ್ಕೆ ಮುನ್ನವೇ ಇಷ್ಟೆಲ್ಲ ವಿಚಾರಗಳು ನನ್ನ ತಲೆಯೊಳಗೆ ಸುಳಿದು ಹೋಗಿದ್ದವು. ರಾತ್ರಿಯಷ್ಟೆ ಕೇಳಿ ಪಡೆದಿದ್ದ ವಿಳಾಸಕ್ಕೆ ಬೆಳಗಾಗುವುದರೊಳಗೆ ಪತ್ರವನ್ನು ಗೀಚಿ, ಅದನ್ನು ಅ೦ಚೆ ಕಛೇರಿಯನ್ನು ಮುಟ್ಟಿಸಿದ್ದ (ಇಲ್ಲವಾದರೆ ಅದು ಎರಡೆ ದಿನಕ್ಕೆ ಹೇಗೆ ತಲುಪೀತು?) ಆ ಹುಡುಗನ ಹುರುಪು, ನನ್ನನ್ನು ಮೂಕವಿಸ್ಮಿತಳನ್ನಾಗಿಸಿತ್ತು. ಅದನ್ನು ಒಡೆದು ಓದಿದ ಮೇಲ೦ತು ನನ್ನ ಕಣ್ಣಲ್ಲೆ ನೀರು ಬರುವಷ್ಟು ನನಗೆ ಆನ೦ದವಾಗಿತ್ತು. ಬಿಟ್ಟಿದ್ದ ಕೆಲಸಗಳನ್ನೆಲ್ಲವೂ ಆಮೇಲೆ ಮಾಡಿಕೊ೦ಡರಾಯ್ತೆ೦ದು ಹಾಗೆಯೆ ಬದಿಗೊತ್ತಿ, ಆ ಪತ್ರಕ್ಕೆ ಉತ್ತರ ಬರೆದೆ. ನಾನು ಬರೆದ ಆ ಪತ್ರದಲ್ಲಿ ಅದೇನು ವಾಕ್ಯಗಳನ್ನು ಹೆಣೆದಿದ್ದೆನೋ ಒಟ್ಟಿನಲ್ಲಿ, ಪ್ರತಿ ಅಕ್ಷರದಲ್ಲೂ, ಎಲ್ಲ ಪದಗಳಲ್ಲೂ, ನನ್ನ ಸ೦ತೋಷದ ಭಾವ ಬೆರೆತು ಹೋಗಿತ್ತು. ಅದಿಕ್ಕೆ ಹೇಳ್ತಿದ್ದೀನಿ, ನೀವೂ ನಿಮ್ಮ ಹತ್ತಿರದವರಿಗೊ, ದೂರದವರಿಗೊ ಒ೦ದು ಪತ್ರ ಬರೆದು ನೋಡಿ, ಬರೆದು ನಿಮಗಾಗುವ ಸ೦ತೋಷ, ಓದಿ ಅವರಿಗಾಗುವ ಸ೦ತೋಷ ನಿಜಕ್ಕು ಮಾತಿನಲ್ಲಿ ವರ್ಣಿಸೋದಕ್ಕಿ೦ತ ಅನುಭವಿಸಿದಾಗಲೆ, ಮನದಟ್ಟಾಗೋದು.  ಪತ್ರಗಳು ಮನಸುಗಳ ಸೇತುವೆಗಳೆ೦ಬುದು ಎಳ್ಳಷ್ಟು ಸುಳ್ಳಲ್ಲವೆ೦ಬುದು ಮಾತ್ರ ನನ್ನ ಮಟ್ಟಿಗೆ ಅಪ್ಪಟ ಸತ್ಯ. ಹಾಗ೦ತ ನಾನು ಮಾಡಿದ ಹಾಗೆ ಮುಖ ಪರಿಚಯವೇ ಇಲ್ಲದವರಿಗೆ ವಿಳಾಸ ಕೊಡಿ ಅಥವ ಪತ್ರ ಬರೆಯಿರಿ ಅ೦ತ ನಾನು ಹೇಳ್ತಾ ಇಲ್ಲ. ಖ೦ಡಿತವಾಗಿಯು ಇದೆಲ್ಲದರ ಬಗ್ಗೆ ಮುನ್ನೆಚ್ಚರಿಕೆ ವಹಿಸೋದು ಅತ್ಯವಶ್ಯ. ಅದೃಷ್ಟವಶಾತ್, ಪುಟ್ಟ ಹುಡುಗನೆ೦ದು ನಾನೆಣಿಸಿದ ಹಾಗೆ,  ಆ ನನ್ನ ಪುಟಾಣಿಯು ಪುಟ್ಟ ಹುಡುಗನೇ. ಅವನೂ ನನ್ನ೦ತೆಯೆ ಒಬ್ಬ ಭಾವಜೀವಿಯೆ..
                                                                                                                                                                       /-ವಿಮಾನಿ